ಇನ್‍ಸ್ಟಿಟ್ಯೂಷನ್ ಆಫ್ ಎಂಜಿನಿಯರ್ಸ್ (ಇಂಡಿಯ), ದಿ
ಭಾರತದ ಎಂಜಿನಿಯರುಗಳ ಸಂಸ್ಥೆ. ಸ್ಥಾಪನೆ 1920ರಲ್ಲಿ, ಉದ್ಘಾಟನೆ 1921ರಲ್ಲಿ. ಕೇಂದ್ರ ಕಚೇರಿ ಕಲ್ಕತ್ತೆಯಲ್ಲಿದೆ. ರಾಯಲ್ ಪ್ರಣಾಳಿಕೆ ದೊರೆತುದರ ಫಲವಾಗಿ 1935ರಲ್ಲಿ ಭಾರತದ ಎಂಜಿನಿಯರುಗಳ ಪ್ರತಿನಿಧಿ ಸಂಸ್ಥೆಯಾಗಿ ಅಸ್ತಿತ್ವ ಗಳಿಸಿತು. ಉದ್ದೇಶ - ಭಾರತದ ಎಂಜಿನಿಯರುಗಳ ಕಾರ್ಯದಕ್ಷತೆಯ ವರ್ಧನೆ, ಗೌರವಯುತ ಬಾಳ್ವೆ ನಡೆಸಲು ಅವರಿಗೆ ಅನುಕೂಲ ಒದಗಿಸುವುದು, ತಾಂತ್ರಿಕ ಪರೀಕ್ಷೆ ನಡೆಸುವುದು, ಎಂಜಿನಿಯರಿಂಗಿನ ವಿವಿಧ ಶಾಖೋಪಶಾಖೆಗಳಲ್ಲಿ ಬೆಳೆಯುತ್ತಿರುವ ಜ್ಞಾನದ ವಿನಿಮಯದ ಏರ್ಪಾಡು, ಇತ್ಯಾದಿ. ಸದಸ್ಯತ್ವ ಪಡೆಯಲು ಸಂಸ್ಥೆಯ ಪರೀಕ್ಷಾಮಂಡಲಿ ಏರ್ಪಡಿಸುವ ಮೆಂಬರ್‍ಷಿಪ್ ಪರೀಕ್ಷೆಯಲ್ಲಿ (ಎ.ಎಂ.ಐ.ಇ.) ಉತ್ತೀರ್ಣನಾಗಬೇಕು ಅಥವಾ ಹಲವಾರು ವರ್ಷಗಳ ಉದ್ಯೋಗಾನುಭವ ಪಡೆದಿರುವ ಬಿ.ಇ. ಪದವೀಧರನಾಗಿ ಸಂಸ್ಥೆಯಿಂದ ವಿನಾಯಿತಿ ಪಡೆದಿರಬೇಕು. ವಾರ್ಷಿಕ ಪರೀಕ್ಷೆ ನಡೆಸಿ, ಈ ಸಂಸ್ಥೆ ನೀಡುತ್ತಿರುವ ಎ.ಎಂ.ಐ.ಇ. ಪದವಿ ಬಿ.ಇ. ಪದವಿಗೆ ಸಮಾನವೆಂದು ಭಾರತ ಸರ್ಕಾರ ಪರಿಗಣಿಸಿದೆ. 2005ರಲ್ಲಿ ಸಂಸ್ಥೆಯ ಒಟ್ಟು ಸದಸ್ಯತ್ವ ಸಂಖ್ಯೆ ನಾಲ್ಕು ಲಕ್ಷಕ್ಕೂ ಮೀರಿದೆ. ಭಾರತದ ವಿವಿಧ ಪ್ರಾಂತಗಳ ರಾಜಧಾನಿಗಳಲ್ಲಿ ಸಂಸ್ಥೆಯ 21 ಕೇಂದ್ರಗಳಿವೆ. 72 ಸ್ಥಳೀಯ ಕೇಂದ್ರಗಳು ಬೇರೆ ಬೇರೆ ಮುಖ್ಯ ಪಟ್ಟಣಗಳಲ್ಲಿವೆ. ಸಂಸ್ಥೆಯ ಕೇಂದ್ರಗಳು ಅಬುಧಾಬಿ, ಬಹ್ರೇನ್, ದುಬೈ, ಕುವೈಟ್ ಮತ್ತ ಖಾತಾರ್‍ಗಳಲ್ಲಿವೆ.

ಈ ಸಂಸ್ಥೆಯು ವರ್ಷಕ್ಕೆ ಎರಡು ಬಾರಿ ನಡೆಸುವ ಪರೀಕ್ಷೆಗಳಲ್ಲಿ ಸುಮಾರು 1 ಲಕ್ಷ ಪರೀಕ್ಷಾರ್ಥಿಗಳು ಭಾಗವಹಿಸುತ್ತಾರೆ. ಬಿ.ಇ. ವ್ಯಾಸಂಗ ಮಾಡಲು ಅವಕಾಶ ಸಿಕ್ಕದ ಸಹಸ್ರಾರು ಆಕಾಂಕ್ಷಿಗಳು ಸಂಸ್ಥೆಯು ನಡೆಸುತ್ತಿರುವ ಈ ಪರೀಕ್ಷೆಗಳ ಮೂಲಕ ಎಂಜನಿಯರ್ ಪದವಿಯನ್ನು ಗಳಿಸಲು ಅವಕಾಶವನ್ನು ಪಡೆಯುತ್ತಿದ್ದಾರೆ.

ಎ.ಎಂ.ಐ.ಇ. ಗಳಿಸಿದವರು ಕೇಂದ್ರ ಸರ್ಕಾರದ, ರಾಜ್ಯ ಸರ್ಕಾರಗಳ, ಕೇಂದ್ರ ಮತ್ತು ರಾಜ್ಯ ಲೋಕ ಸೇವಾ ಆಯೋಗಗಳ ಹುದ್ದೆಗಳಿಗೆ ಸ್ಪರ್ಧಿಸಲು ಅರ್ಹತೆ ಪಡೆದಿರುತ್ತಾರೆ. ಭಾರತದ ಹಲವು ವಿಶ್ವವಿದ್ಯಾನಿಲಯಗಳಲ್ಲಿ ಮತ್ತು ಐ.ಐ.ಟಿ.ಗಳಲ್ಲಿ ಪೋಸ್ಟ್ ಗ್ರ್ಯಾಜುಯೇಟ್ ವ್ಯಾಸಂಗ ಮಾಡಲೂ ಇವರಿಗೆ ಅವಕಾಶ ಉಂಟು. 

ಸಂಸ್ಥೆಯ ನೇತೃತ್ವದಲ್ಲಿ ರಾಷ್ಟ್ರೀಯ ವಿನ್ಯಾಸ ಮತ್ತು ಸಂಶೋಧನಾ ಸಂಸ್ಥೆ, ಗ್ರಾಮೀಣ ವಿಕಾಸ ಸಂಸ್ಥೆ, ಎಂಜನಿಯರಿಂಗ್ ಸ್ಟಾಫ್ ಕಾಲೇಜ್ ಆಫ್ ಇಂಡಿಯ, ಜಲ ನಿರ್ವಹಣ ವೇದಿಕೆ ಎಂಬ ವಿವಿಧ ಉದ್ದೇಶಗಳಿಗೆ ಸ್ಥಾಪಿಸಲ್ಪಟ್ಟಿರುವ ಅಂಗ ಸಂಸ್ಥೆಗಳು ಕ್ರಮವಾಗಿ ಬೆಂಗಳೂರು, ಕಲ್ಕತ್ತ, ಹೈದರಾಬಾದ್ ಮತ್ತು ಅಹಮದಾಬಾದ್‍ಗಳಲ್ಲಿ ಕಾರ್ಯ ನಿರ್ವಹಿಸುತ್ತಿವೆ.
ಕರ್ನಾಟಕದಲ್ಲಿ ರಾಜ್ಯದ ಕೇಂದ್ರವು ಬೆಂಗಳೂರಿನಲ್ಲಿಯೂ, ಸ್ಥಳೀಯ ಕೇಂದ್ರಗಳು ಬೆಳಗಾಂ, ದಾವಣಗೆರೆ, ಧಾರವಾಡ, ಗುಲ್ಬರ್ಗ, ಮಂಗಳೂರು, ಮುನೀರಾಬಾದ್ ಮತ್ತು ಮೈಸೂರು-ಈ ಸ್ಥಳಗಳಲ್ಲಿಯೂ ಕೆಲಸ ಮಾಡುತ್ತಿವೆ. ಕರ್ನಾಟಕದಲ್ಲಿ ಒಟ್ಟು 28,000 ಕ್ಕೂ ಹೆಚ್ಚು ಸಂಸ್ಥೆಯ ಸದಸ್ಯರಿದ್ದಾರೆ.
(ಪರಿಷ್ಕರಣೆ: ಎನ್. ಎಸ್. ಸುಬ್ಬಣ್ಣ)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ